ಎಲ್ಲರಿಗೂ ನಮಸ್ಕಾರ: ಪಂಪನ ಒಂದು ಪದ್ಯ.

ನಮಸ್ಕಾರ. ಬಹುಶಃ ಕೆಲವು ತಿಂಗಳಿಂದ ನಾನು ಏನೂ ಬರೆದಿಲ್ಲ. ಈಗ ಮತ್ತೆ ಬರೆಯುವ ಮನಸ್ಸು ಬಂದಿದೆ. ಗೆಳೆಯ ನಾಡಿಗ್ ಅವರು ನನ್ನದೇ ಹೆಸರಿನ ಬ್ಲಾಗ್ ತೆರೆದುಕೊಟ್ಟು ಉಪಕಾರ ಮಾಡಿದ್ದಾರೆ. ಅವರಿಗೆ ಕೃತಜ್ಞ. ಇನ್ನು ಮೇಲೆ ನನ್ನ ದೊಡ್ಡ ಪ್ರಮಾಣದ ಬರವಣಿಗೆಗಳೆಲ್ಲ ಇಲ್ಲಿಯೇ ನಿಮ್ಮೆದುರು ಕಾಣಿಸಿಕೊಳ್ಳುತ್ತವೆ. ಸಾಧ್ಯವಾದಾಗ ಒಂದಷ್ಟು ಫೋಟೋಗಳು ಕೂಡ.
ಮಗಳ ಮದುವೆ ಮುಗಿದು ಮೂರು ದಿನಗಳು ಕಳೆದಿವೆ. ಸಂಭ್ರಮ, ಕಾತರ, ಕಳವಳ, ಆಯಾಸ ಎಲ್ಲವೂ ಒಂದರೊಡನೊಂದು ಬೆರೆತು ಮನಸ್ಸು ರೋಲರ್ ಕೋಸ್ಟರ್‌ನಲ್ಲಿಯೇ ಇದ್ದಂತೆ ಇದೆ. ಇಂಥ ಹೊತ್ತಿನಲ್ಲಿ ಕನ್ನಡದ ಹಿರಿಯ ಮನಸ್ಸು, ಅದೇ ಪಂಪ, ಆದಿಪುರಾಣದಲ್ಲಿ ಹೇಳಿರುವ ಒಂದು ಮಾತನ್ನು ಗೆಳೆಯ ರಾಮು ನನ್ನ ಗಮನಕ್ಕೆ ತಂದ. ಅದೆಷ್ಟು ಚೆನ್ನಾಗಿ ಪಂಪ ಮದುವೆಯ ಮನೆಯ ಭಾವನಗೆಳನ್ನು ಹಿಡಿದಿಟ್ಟಿದ್ದಾನೆ! ಅದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿದೆ.

ಪೊಡೆವಡುವ ಅಪ್ಪಿಕೊಳ್ವ ನೆನೆಯುತ್ತಿರಿಮ್ ಎಂಬ
ಸಮಸ್ತ ವಸ್ತುವಂ ಕುಡುವ
ಪಲರ್ಮೆಯುಂ ಪರಸಿ ಸೇಸೆಯನ್ ಇಕ್ಕುವ
ಬುದ್ಧಿವೇಳ್ವ
ಕಯ್ಯೆಡೆ ನಿಮಗೆ ಎಂದು ಒಡಂಬಡಿಪ
ನಲ್ಲರ ಅಗಲ್ಕೆಗೆ ಕಣ್ಣ ನೀರ್ಗಳಂ ಮಿಡಿವ
ಬಹು ಪ್ರಕಾರ ಜನಸಂಕಟಮ್ ಒಪ್ಪಿದುದು ಆ ಪ್ರಯಾಣದೊಳ್ (ಆದಿಪುರಾಣ ೪.೫೭)

ಸುಮ್ಮನೆ ಈ ಪದ್ಯವನ್ನು ನೋಡಿ. ಇಲ್ಲಿ ಎಲ್ಲೂ ಮನುಷ್ಯರ ಪ್ರಸ್ತಾಪ ಇಲ್ಲವೇ ಇಲ್ಲ. ಮದುವೆ ಮುಗಿಸಿ ಹೊರಟ ದಿಬ್ಬಣದ ಕ್ರಿಯೆಗಳು ಮಾತ್ರ ಇವೆ. ಮದುವೆಮನೆಯಿಂದ ಹೊರಡುವಾಗ ಏಕಕಾಲದಲ್ಲಿ ನಡೆಯುವ ಹತ್ತಾರು ಕ್ರಿಯೆಗಳ ಸಂದಿಲ್ಲದ ಮಿಶ್ರಣಮಾತ್ರ ಇದೆ. ಮದುವೆಗಳು ಇರುವುದೇ ಹೀಗಲ್ಲವೆ!
ಹೊತ್ತಾಯಿತು ಹೊರಡಿ, ಹೊರಡಿ ಅನ್ನುವ
ಅಪ್ಪಿಕೊಳ್ಳುವ (ಮದುವೆ ಮನೆಯಲ್ಲಿ ಅದು ಅಸಹಜ ಅಲ್ಲವೇ ಅಲ್ಲ!)
ಮರೀಬೇಡಿ ಮರೀಬೇಡಿ ಎಂದು ಹಾತೊರೆದು ಬೇಡಿಕೊಳ್ಳುತ್ತ, ಅಯ್ಯೋ ಈ ಕ್ಷಣ ಮುಗಿದೇ ಬಿಡುತ್ತದಲ್ಲ ಎಂದು ನೋಯುವ, ಮತ್ತೆ ಭೇಟಿಯಾದೀತು ಅನ್ನುವ ವಿಶ್ವಾಸವೂ ಆಗದಿದ್ದರೆ ಎಂಬ ಆತಂಕವೂ ಇರುವ,
ಗಿಫ್ಟುಗಳನ್ನು ಕೊಡುವ, ಪಡೆಯುವ, ಇನ್ನೂ ಏನೋ ಕೊಡಬೇಕಿತ್ತೆಂದುಕೊಳ್ಳುವ, ಕೊಟ್ಟದ್ದು ಸಾಲದೋ ಎಂದು ಅಳುಕುವ,
ಅಕ್ಷತೆ ಹಾಕಿ ಆಶೀರ್ವಾದ ಮಾಡುವ,
ಹೀಗಲ್ಲ ಹಾಗಲ್ಲ ಹೀಗೆಲ್ಲ ಇರಬೇಕು ಅಂತ ಬುದ್ಧಿಮಾತನ್ನು ಅಗತ್ಯವಿಲ್ಲದಿದ್ದರೂ ಹೇಳುವ, ಹೇಳದಿದ್ದರೆ ನಾವೆಲ್ಲಿ ತಪ್ಪಿಯೇವೋ ಎಂದು ಅಂಜುವ, ಹೇಳುವ ಕೇಳುವ ಸಾಮಾನ್ಯ ಮಾತುಗಳಿಗೆಲ್ಲ ಸಂದರ್ಭದ ಕಾರಣದಿಂದ ಉಜ್ವಲತೆ ಬಂದು ಜ್ವಾಜ್ಯಲ್ಯಮಾನವಾಗಿವೆ ಎಂದು ಭ್ರಮಿಸುವ,
ಇನ್ನಿವಳು ನಿಮ್ಮ ಮನೆಯ ಮಗಳು ಎಂದು ಲಕ್ಷಾವಧಿ ತಂದೆತಾಯಿಯರಂತೆ ತಾವೂ ನುಡಿವ,
ಮದುವೆ ಮನೆಯಲ್ಲಿ ಕ್ಷಣ ಮಿಂಚೆ, ಮನಸು ಸೆಳೆದ ನಲ್ಲರನ್ನೋ ನಲ್ಲೆಯರನ್ನೋ ಇನ್ನು ಕಾಣಲಾರೆವಲ್ಲ ಎಂದು ಕೊರಗುವ,
ಕಣ್ಣಂಚಿನಲ್ಲಿ ಒಂದು ಹನಿ ಅಮೂಲ್ಯವಾದ ಕಂಬನಿ ಮೂಡುವ
ಮತ್ತೆ ಇವೆಲ್ಲವೂ ಏಕಕಾಲದಲ್ಲಿ ತಮ್ಮಷ್ಟಕೆತಾವೇ ಸಂಭವಿಸುತ್ತಿರುವ ಚಿತ್ರ ಇದೆಯಲ್ಲ ಅದನ್ನು
ಬಹುಪ್ರಕಾರ ಜನಸಂಕಟಮ್ ಅಂದಿರುವುದಂತೂ ಅದ್ಭುತ. ಎಲ್ಲ ಮದುವೆಗಳ ಮುಕ್ತಾಯವೂ ಹೀಗೆಯೇ. ಅದಕ್ಕೆಂದೇ ಕ್ರಿಯೆಗಳಿವೆ, ಜನಗಳಿಲ್ಲ. ಜನಸಂಕಟವಿದೆ, ಜನವಿಲ್ಲ. ಕೋಟಿಗಟ್ಟಲೆ ಮದುವೆಗಳಲ್ಲಿ ಕೋಟಿಗಟ್ಟಲೆ ಬಾರಿ ನಡೆಯುವ ಕ್ರಿಯಾವಿಧಿಗಳನ್ನು ಎಷ್ಟು ಚೆನ್ನಾಗಿ ಈ ಪದ್ಯ ಹೇಳುತ್ತದೆ. ಆದಿನಾಥನ ಒಂದು ಜನ್ಮದ ಮದುವೆಯಾದರೂ, ಸಾಮಾನ್ಯನಾದ ನನ್ನಂಥವನ ಮಗಳ ಮದುವೆಯಾದರೂ ಬಹುಪ್ರಕಾರ ಜನ ಸಂಕಟ ಏಕಪ್ರಕಾರವಾಗಿ ಸಂಭವಿಸುತ್ತಲೇ ಇರುತ್ತದಲ್ಲ. ಪಂಪನಿಗೆ ನಮಸ್ಕಾರ.

Comments

ಅರುಣ್ ಪಣಿಕ್ಕರ್ ಮತ್ತು ಪಂ

ಬಹಳ ಚೆನ್ನಾಗಿ ಬರೆದಿದ್ದೀರಿ. ಕೇರಳದ ಅರುಣ್ ಪಣಿಕ್ಕರ್ ಎಂಬ ಕಲಾವಿದ ಒಬ್ಬ ಮನುಷ್ಯನ ಚಿತ್ರವೂ ಇಲ್ಲದೆ ಮದುವೆಯ ಚಿತ್ರವೊಂದನ್ನು ಬಿಡಿಸಿದ್ದರು. ಸ್ವಲ್ಪ ಹೆಚ್ಚು ಕಡಿಮೆಯಾದರೂ ರವಿವರ್ಮನ ಮಾಮೂಲು ಪೇಟಿಂಗ್ ಆಗಬಹುದಾದ ಒಂದು ವಸ್ತುವನ್ನು ಅವರು ನಿರ್ವಹಿಸಿದ್ದನ್ನು ನೋಡಿದ ನಾನು ಅವರ ಫ್ಯಾನ್ ಆಗಿಬಿಟ್ಟಿದ್ದೆ. ಪಂಪ ಇದನ್ನು ಅಕ್ಷರಗಳಲ್ಲಿ ಸಾಧಿಸಿದ ಸಾವಿರಾರು ವರ್ಷಗಳ ನಂತರ ಇದಾಯಿತು ಎಂಬುದು ಕುತೂಹಲಕರ.

Post new comment

The content of this field is kept private and will not be shown publicly.
  • Allowed HTML tags: <a> <em> <strong> <cite> <code> <ul> <ol> <li> <dl> <dt> <dd>
  • Lines and paragraphs break automatically.

More information about formatting options